ನಂದಿತಾ ದಾಸ್ (ಜನನ ೭ ನವೆಂಬರ್ ೧೯೬೯), ಪ್ರಶಸ್ತಿ ವಿಜೇತೆ ಭಾರತೀಯ ಚಲನಚಿತ್ರ ನಟಿ ಹಾಗು ನಿರ್ದೇಶಕಿ ಎಂದು ಹೆಸರಾಗಿದ್ದಾರೆ. ನಟಿಯಾಗಿ, ಈಕೆ ಫೈರ್ (೧೯೯೬), ಅರ್ಥ್ (೧೯೯೮), ಬವನ್ಡರ್ (೨೦೦೦) ಹಾಗು ಆಮಾರ್ ಭುವನ್ (೨೦೦೨) ಚಿತ್ರದಲ್ಲಿನ ನಟನೆಯಿಂದಾಗಿ ಗಮನ ಸೆಳೆದಿದ್ದಾರೆ. ನಿರ್ದೇಶಕಿಯಾಗಿ, ಫಿರಾಕ್ (೨೦೦೮) ಎಂಬ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ; ಚಿತ್ರವು ಹಲವು ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಅವರ ಸಾಧನೆಗಾಗಿ ಫ್ರಾನ್ಸ್ ಸರ್ಕಾರವು ಷೆವಲಿಯರ್ ಆಫ್ ದಿ ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟರ್ಸ್ ಪುರಸ್ಕಾರ ನೀಡಿ ಗೌರವಿಸಿದೆ. == ಆರಂಭಿಕ ಜೀವನ == ದಾಸ್ ನವದೆಹಲಿಯಲ್ಲಿ ಜನಿಸಿದರು, ಇವರ ತಂದೆ ಪ್ರಸಿದ್ಧ ಭಾರತೀಯ ವರ್ಣಚಿತ್ರಕಾರ, ಓರಿಯಪಂಗಡದ ಹಿಂದೂಧರ್ಮದವರಾದ ಜತಿನ್ ದಾಸ್, ಹಾಗು ತಾಯಿ ವರ್ಷಾ ಗುಜರಾತಿ ಜೈನ ಧರ್ಮಕ್ಕೆ ಸೇರಿದ್ದು,ಇವರೂ ಲೇಖಕಿಯಾಗಿದ್ದಾರೆ. ಇವರು ನವದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಅಭ್ಯಾಸ ಮಾಡಿದರು. ಇವರು ಮಿರಾಂಡ ಹೌಸ್(ದೆಹಲಿ ವಿಶ್ವವಿದ್ಯಾಲಯ)ನಿಂದ ಭೂಗೋಳಶಾಸ್ತ್ರದಲ್ಲಿ ಪದವಿಯನ್ನು ಹಾಗು ಡೆಲ್ಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ನಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. == ವೃತ್ತಿಜೀವನ == === ನಟನೆ === ನಂದಿತಾ ದಾಸ್ ತಮ್ಮ ನಟನಾವೃತ್ತಿಯನ್ನು ಜನ್ನತ್ಯ ಮಂಚ್ ಎಂಬ ರಂಗಭೂಮಿ ತಂಡದಿಂದ ಆರಂಭಿಸಿದರು. ಇವರು ರಿಷಿ ವ್ಯಾಲಿ ಸ್ಕೂಲ್ ನಲ್ಲಿ ಬೋಧನೆ ಮಾಡುತ್ತಿದ್ದರು. ಇವರು ದೀಪಾ ಮೆಹ್ತಾರ ಚಿತ್ರಗಳಾದ ಫೈರ್ , ಅರ್ಥ್ ನಲ್ಲಿ ಅಮೀರ್ ಖಾನ್ ರೊಂದಿಗೆ, ಬವನ್ಡರ್(ಜಗಮೋಹನ್ ಮುಂಧ್ರ ನಿರ್ದೇಶನ) ಹಾಗು ಆಮಾರ್ ಭುವನ್ (ಮೃಣಾಲ್ ಸೇನ್ ನಿರ್ದೇಶನ)ಚಿತ್ರಗಳಲ್ಲಿನ ಅಭಿನಯಕ್ಕಾಗಿ ಖ್ಯಾತರಾಗಿದ್ದಾರೆ. ದಾಸ್, ಕರಡಿ ಟೇಲ್ಸ್ ರವರ ಮಕ್ಕಳ ಧ್ವನಿಪುಸ್ತಕ ಸರಣಿ "ಅಂಡರ್ ದಿ ಬ್ಯಾನ್ಯನ್" ಗೆ ಕಥೆಗಾರ್ತಿಯಾಗಿ/ನಿರೂಪಕಿಯಾಗಿ ತಮ್ಮ ಧ್ವನಿ ನೀಡಿದ್ದಾರೆ. ಚರಕ ಆಡಿಯೋಬುಕ್ಸ್ ಬಿಡುಗಡೆ ಮಾಡಿದ ಮಹಾತ್ಮಗಾಂಧಿಯವರ ಆತ್ಮಚರಿತ್ರೆ "ದಿ ಸ್ಟೋರಿ ಆಫ್ ಮೈ ಎಕ್ಸ್ಪರಿಮೆಂಟ್ಸ್ ವಿಥ್ ಟ್ರೂಥ್" ಧ್ವನಿಸುರಳಿಯಲ್ಲೂ ಸಹ ನಿರೂಪಕಿಯಾಗಿ ತಮ್ಮ ಧ್ವನಿ ನೀಡಿದ್ದಾರೆ. ಮಕ್ಕಳ ಸರಣಿ, ದಿ ವಂಡರ್ ಪೆಟ್ಸ್ ನಲ್ಲಿ ಬೆಂಗಾಲ್ ಟೈಗರ್ ಆಗಿಯೂ ಸಹ ತಮ್ಮ ಧ್ವನಿಯನ್ನು ಒದಗಿಸಿದ್ದಾರೆ. ನಂದಿತಾ ಇಲ್ಲಿಯ ತನಕ ಹತ್ತು ವಿವಿಧ ಭಾಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ: ಇಂಗ್ಲಿಷ್, ಹಿಂದಿ, ಬೆಂಗಾಲಿ, ಮಲಯಾಳಂ, ತಮಿಳು, ತೆಲುಗು, ಉರ್ದು, ಮರಾಠಿ, ಓರಿಯ ಹಾಗು ಕನ್ನಡ. === ನಿರ್ದೇಶನ === ೨೦೦೮ರಲ್ಲಿ, ತಾವು ನಿರ್ದೇಶಿಸಿದ ಚೊಚ್ಚಲ ಚಿತ್ರ ಫಿರಾಕ್ ನ ಚಿತ್ರೀಕರಣವನ್ನು ಪೂರ್ಣಗೊಳಿಸಿದರು. ಫಿರಾಕ್ ಸಾವಿರಾರು ಸತ್ಯಕಥೆಗಳನ್ನು ಆಧರಿಸಿದ ಕಾದಂಬರಿಯಾಗಿದ್ದು, ೨೦೦೨ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ಒಂದು ತಿಂಗಳ ನಂತರ ಜರುಗುವ ಘಟನೆಗಳ ಸುತ್ತ ಹೆಣೆಯಲಾಗಿದೆ. ಇದು ೨೪ ಗಂಟೆಗಳ ಅವಧಿಯಲ್ಲಿ ಹಲವಾರು ಕಥೆಗಳನ್ನು ಹೆಣೆಯಲಾದ ಒಂದು ಸಮಗ್ರ ಚಲನಚಿತ್ರವಾಗಿದೆ, ಚಿತ್ರದಲ್ಲಿ ಸಮಾಜದ ವಿವಿಧ ಸ್ತರದ ಜನರು ಹಿಂಸಾಚಾರದ ದೀರ್ಘಕಾಲಿಕ ಪರಿಣಾಮಕ್ಕೆ ಹೇಗೆ ಸಿಲುಕಿಕೊಳ್ಳುತ್ತಾರೆಂಬುದನ್ನು ತೋರಿಸಲಾಗಿದೆ. ಚಿತ್ರವು ಸಾಮಾನ್ಯ ಜನರ ಭಾವನಾತ್ಮಕ ಪಯಣವನ್ನು ನಿರೂಪಿಸುತ್ತದೆ-ಕೆಲವರು ಇದಕ್ಕೆ ಬಲಿಯಾದರೆ, ಕೆಲವರು ದುಷ್ಕೃತ್ಯವನ್ನು ಎಸಗುತ್ತಾರೆ; ಮತ್ತೆ ಕೆಲವರು ಇದನ್ನು ಮೂಕರಾಗಿ ವೀಕ್ಷಿಸುತ್ತಾರೆ. ಚಿತ್ರದ ತಾರಾಗಣದಲ್ಲಿ ನಸೀರುದ್ದೀನ್ ಶಾ, ರಘುಬೀರ್ ಯಾದವ್, ಪರೇಶ್ ರಾವಲ್, ದೀಪ್ತಿ ನವಲ್, ಸಂಜಯ್ ಸೂರಿ, ಟಿಸ್ಕಾ ಚೋಪ್ರ, ಶಹಾನ ಗೋಸ್ವಾಮಿ ಹಾಗು ನೋವಾಜ್ ಮುಂತಾದವರಿದ್ದಾರೆ. ಚಿತ್ರವು ೨೦೦೮ರಲ್ಲಿ ಸಿಂಗಾಪೂರಿನಲ್ಲಿ ನಲ್ಲಿ ನಡೆದ ಏಶಿಯನ್ ಫೆಸ್ಟಿವಲ್ ಆಫ್ ಫಸ್ಟ್ ಫಿಲಂಸ್ ನಲ್ಲಿ ಮನ್ನಣೆ ಗಳಿಸಿತು, ಅಲ್ಲಿ ಚಿತ್ರವು "ಅತ್ಯುತ್ತಮ ಚಿತ್ರ", "ಅತ್ಯುತ್ತಮ ಚಿತ್ರಕಥೆ/ಕಥೆ", ಹಾಗು "ಅತ್ಯುತ್ತಮ ಚಿತ್ರವೆಂದು ಫಾರಿನ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಶನ್ ಪರ್ಪಲ್ ಆರ್ಕಿಡ್ ಪ್ರಶಸ್ತಿಯನ್ನು ಗಳಿಸಿತು". ಚಿತ್ರವು, ಇತರ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರಶಸ್ತಿಯನ್ನು ಗಳಿಸಿದೆ, ಇದರಲ್ಲಿ ಗ್ರೀಸ್ ನಲ್ಲಿ ನಡೆದ ಅಂತರರಾಷ್ಟ್ರೀಯ ಥೆಸ್ಸಲೋನಿಕಿ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ, ಕೇರಳದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ, ಹಾಗು ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರದ ಸಂಕಲನಕಾರ ಶ್ರೀಕರ್ ಪ್ರಸಾದ್ ಗೆ ಸಂದ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿಗಳು ಸೇರಿವೆ. ಚಿತ್ರವು ಭಾರತದಲ್ಲಿ ೨೦ನೇ ಮಾರ್ಚ್ ೨೦೦೯ರಲ್ಲಿ ಬಿಡುಗಡೆಯಾಯಿತು. ಚಿತ್ರವು ಕಾರಾ ಚಲನಚಿತ್ರೋತ್ಸವದಲ್ಲೂ ಪ್ರಶಸ್ತಿಯನ್ನು ಗಳಿಸಿತು. "'ಫಿರಾಕ್' ಚಿತ್ರವು ಟೊರೊಂಟೊ, ಲಂಡನ್, ಪುಸನ್ ನಿಂದ ಹಿಡಿದು ಕೊಲ್ಕತ್ತಾ ಹಾಗು ಟ್ರಿವೆಂಡ್ರಂವರೆಗೂ ವಿಶ್ವದಾದ್ಯಂತ ವೀಕ್ಷಕರ ಶ್ಲಾಘನೆಗೆ ಪಾತ್ರವಾಗಿದ್ದಕ್ಕೆ ನನಗೆ ಸಂತೋಷವಾಗಿದೆ. ಎಷ್ಟಾದರೂ, ಮಾನವನ ಭಾವನೆಗಳು ಸಾರ್ವತ್ರಿಕವಾದವು, ಹಾಗು ಜಗತ್ತಿನ ವಿವಿಧ ಭಾಗಗಳಲ್ಲಿ ನನಗೆ ದೊರೆತ ಪ್ರತಿಕ್ರಿಯೆಯಿಂದ, ಆ ಭಾವನೆಗಳು ನನಗೆ ಹೆಚ್ಚು ಅರ್ಥವಾದವು. ವೀಕ್ಷಕರು ಎಲ್ಲೆಡೆಯು ಪಾತ್ರಗಳ ಪಯಣದೊಂದಿಗೆ ಪರಾನುಭೂತಿ ಶಕ್ತಿಯನ್ನು ಅನುಭವಿಸುವಲ್ಲಿ ಸಫಲರಾಗಿದ್ದಾರೆ. ಇದು ಭಾರತದಲ್ಲಿ ನಡೆದಿರುವುದರಿಂದ ಹೆಚ್ಚು ಅನುಭವಕ್ಕೆ ಬರುತ್ತದೆ, ಹಾಗು ಈ ರೀತಿಯಾಗಿ ಇಲ್ಲಿನ ಜನರು ಇದರೊಂದಿಗೆ ಹೆಚ್ಚು ಗುರುತಿಸಿಕೊಳ್ಳುತ್ತಾರೆ. ಚಿತ್ರವು ಮೌನವಾಗಿ ಉಳಿದಿರುವ ಸನ್ನಿವೇಶಕ್ಕೆ ಧ್ವನಿ ನೀಡಿತೆಂದು ಹೇಳಬಹುದು, ಹಾಗು ಇದನ್ನು ಕಡೆಪಕ್ಷ ಒಂದು ಬಾರಿಯಾದರೂ ವೀಕ್ಷಿಸಬೇಕು. ನಾವು ಪ್ರವೇಶ ಪಡೆದ ಪ್ರತಿಯೊಂದು ಚಲನಚಿತ್ರೋತ್ಸವ ಸ್ಪರ್ಧೆಯಲ್ಲೂ ಪ್ರಶಸ್ತಿಯನ್ನು ಗೆಲ್ಲುವುದು ಹಿರಿಮೆಯ ವಿಷಯವಾಗಿದ್ದರೂ, ವಾಸ್ತವವಾಗಿ ವೀಕ್ಷಕರ ಪ್ರತಿಕ್ರಿಯೆಯು ಇಲ್ಲಿ ಹೆಚ್ಚಿನ ಮಹತ್ವ ಪಡೆಯುತ್ತದೆ," ಎಂದು ರೇಡಿಯೋ ಸರ್ಗಂಗೆ ನಂದಿತಾ ದಾಸ್ ಪ್ರತಿಕ್ರಿಯಿಸುತ್ತಾರೆ. == ವೈಯಕ್ತಿಕ ಜೀವನ == ೨೦೦೨ರಲ್ಲಿ, ದಾಸ್ ತಮ್ಮ ದೀರ್ಘಾವಧಿಯ ಗೆಳೆಯ ಸೌಮ್ಯ ಸೇನ್ ರನ್ನು ವರಿಸುತ್ತಾರೆ. ದಂಪತಿಗಳು, ಸಾಮಾಜಿಕ ಕಳಕಳಿಯ ಜಾಹಿರಾತು ಚಿತ್ರಗಳನ್ನು ನಿರ್ಮಿಸುವ ಉದ್ದೇಶ ಹೊಂದಿರುವ ಜಾಹಿರಾತು ಸಂಸ್ಥೆ ಲೀಪ್ ಫ್ರಾಗ್ ನ್ನು ಆರಂಭಿಸುತ್ತಾರೆ. ದಂಪತಿಗಳು ೨೦೦೯ರಲ್ಲಿ ವಿಚ್ಛೇದನ ಪಡೆಯುತ್ತಾರೆ. ಕೆಲವು ತಿಂಗಳ ಕಾಲ ಮುಂಬಯಿ ನಗರದಾಚೆ ನೆಲೆಗೊಂಡಿದ್ದ ಕೈಗಾರಿಕೋದ್ಯಮಿ ಸುಬೋಧ್ ಮಸ್ಕಾರ ಜೊತೆಗೆ ನಿಶ್ಚಿತ ಅವಧಿಯನ್ನು ಕಳೆದ ನಂತರ, ಜನವರಿ ೨, ೨೦೧೦ರಲ್ಲಿ ಅವರನ್ನು ವರಿಸಿ, ಮುಂಬಯಿಗೆ ಸ್ಥಳಾಂತರಗೊಳ್ಳುತ್ತಾರೆ. ದಾಸ್ ಹಾಗು ಮಸ್ಕಾರ ದಂಪತಿಗೆ ೧೧ ಆಗಸ್ಟ್ ೨೦೧೦ರಲ್ಲಿ ವಿಹಾನ್ ಎಂಬ ಗಂಡು ಮಗು ಜನಿಸಿತು. == ಲೋಕೋಪಕಾರ == ದಾಸ್ ವಿಶ್ವಾದ್ಯಂತ ತಮ್ಮ ಚಿತ್ರಗಳ ಪ್ರಭಾವದ ಬಗ್ಗೆ ಹಾಗು ಭಾರತಕ್ಕೆ ಅಗತ್ಯವಿರುವ ಶಕ್ತಿಶಾಲಿ ಸಾಮಾಜಿಕ ಚಳವಳಿಗಳ ಬಗ್ಗೆ ಭಾಷಣವನ್ನು ನೀಡುತ್ತಾರೆ. ೧೨ ಏಪ್ರಿಲ್ ೨೦೦೭ರಲ್ಲಿ, ಫೈರ್ ಚಿತ್ರದ ಪ್ರದರ್ಶನದ ನಂತರ MITಯಲ್ಲಿ ಮಾತನಾಡುತ್ತಾರೆ. ಮಕ್ಕಳ ಉಳಿವು, ವಿರುದ್ಧ, ಹಾಗು ಮಹಿಳೆಯರ ಮೇಲೆ ನಡೆಯುವ ಹಿಂಸಾಚಾರದ ವಿರುದ್ಧವಾಗಿಯೂ ಸಹ ಅವರು ಪ್ರಚಾರಾಂದೋಲನ ಕೈಗೊಳ್ಳುತ್ತಾರೆ. ೨೦೦೯ರಲ್ಲಿ ಇವರನ್ನು ಚಿಲ್ಡ್ರನ್'ಸ್ ಫಿಲಂ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷೆಯನ್ನಾಗಿ ನೇಮಕ ಮಾಡಲಾಯಿತು. == ಪ್ರಶಸ್ತಿಗಳು ಮತ್ತು ಗೌರವಗಳು == ೨೦೦೧ ಸಾಂತ ಮೋನಿಕಾ ಚಲನಚಿತ್ರೋತ್ಸವ ಗೆಲುವು - ಅತ್ಯುತ್ತಮ ನಟಿ - ಬವನ್ಡರ್ ೨೦೦೨ ಕೈರೋ ಚಲನಚಿತ್ರೋತ್ಸವ ಗೆಲುವು - ಅತ್ಯುತ್ತಮ ನಟಿ - ಅಮಾರ್ ಭುವನ್ ೨೦೦೨ ತಮಿಳು ನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಗೆಲುವು - ವಿಶೇಷ ಪ್ರಶಸ್ತಿ - ಕಣ್ಣತಿಲ್ ಮುತ್ತಮಿಟ್ಟಾಲ್ ೨೦೦೮ ಕ್ಯಾನ್ಸ್ ಚಲನಚಿತ್ರೋತ್ಸವ ಮೇ ೨೦೦೫ - ದಾಸ್ ೨೦೦೫ರ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಜ್ಯೂರಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು ೨೦೦೬ ನಂದಿ ಪ್ರಶಸ್ತಿಗಳು ಗೆಲುವು - ಅತ್ಯುತ್ತಮ ನಟಿ - ಕಮಲಿ ೨೦೦೮ ಏಶಿಯನ್ ಫಿಲಂಸ್ ಆಫ್ ಫಸ್ಟ್ ಫಿಲಂಸ್ ಗೆಲುವು - ಅತ್ಯುತ್ತಮ ಚಲನಚಿತ್ರ - ಫಿರಾಕ್ ಗೆಲುವು - ಅತ್ಯುತ್ತಮ ಚಿತ್ರಕಥೆ - ಫಿರಾಕ್ ಗೆಲುವು - ಅತ್ಯುತ್ತಮ ಚಲನಚಿತ್ರಕ್ಕಾಗಿ ಫಾರಿನ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಶನ್ ಪರ್ಪಲ್ ಆರ್ಕಿಡ್ ಪ್ರಶಸ್ತಿ - ಫಿರಾಕ್ ೨೦೦೮ ಫ್ರಾನ್ಸ್ ಸರ್ಕಾರ ಗೆಲುವು - ಷೆವಲಿಯರ್ ಆಫ್ ದಿ ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟರ್ಸ್ ೨೦೦೯ ಕೇರಳದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಗೆಲುವು - ವಿಶೇಷ ಜ್ಯೂರಿ ಪ್ರಶಸ್ತಿ - ಫಿರಾಕ್ ೨೦೦೯ ಅಂತಾರಾಷ್ಟ್ರೀಯ ಥೆಸ್ಸಲೋನಿಕಿ ಚಲನಚಿತ್ರೋತ್ಸವ ಗೆಲುವು - ವಿಶೇಷ ಪ್ರಶಸ್ತಿ (ಎವೆರಿಡೇ ಲೈಫ್: ಟ್ರ್ಯಾನ್ಸೆನ್ಡೆನ್ಸ್ ಆರ್ ರಿಕನ್ಸಿಲಿಯೇಶನ್ ಪ್ರಶಸ್ತಿ) - ಫಿರಾಕ್ ನಾಮನಿರ್ದೇಶನ - ಗೋಲ್ಡನ್ ಅಲೆಕ್ಸ್ಯಾನ್ಡರ್ - ಫಿರಾಕ್ ೨೦೧೦ ಫಿಲಂಫೇರ್ ಪ್ರಶಸ್ತಿಗಳು ಗೆಲುವು - ವಿಶೇಷ ಪ್ರಶಸ್ತಿ - ಫಿರಾಕ್ == ಚಲನಚಿತ್ರಗಳ ಪಟ್ಟಿ == === ನಟಿ === === ನಿರ್ದೇಶನ === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಧಿಕೃತ ಜಾಲತಾಣ ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಸಂದರ್ಶನ 2003 ಸಂದರ್ಶನ 2006 2011-04-24 ವೇಬ್ಯಾಕ್ ಮೆಷಿನ್ ನಲ್ಲಿ. ನಂದಿತಾ ದಾಸ್ 2012-02-08 ವೇಬ್ಯಾಕ್ ಮೆಷಿನ್ ನಲ್ಲಿ. @ 2014-01-05 ವೇಬ್ಯಾಕ್ ಮೆಷಿನ್ ನಲ್ಲಿ. ಎವೆರಿಒನ್ ಕ್ಯಾಂಪೈನ್ ಆಫ್ ಸೇವ್ ದಿ ಚಿಲ್ಡ್ರನ್ ಇಂಡಿಯಾ 2011-01-06 ವೇಬ್ಯಾಕ್ ಮೆಷಿನ್ ನಲ್ಲಿ.